“ಹಜ್ಜ್” ಒಂದು ಸುಂದರ ಆರಾದನ ಕರ್ಮವಾಗಿದೆ
ಹಜ್ಜ್ ನ ಒಂದು ಸುಂದರ ನೋಟ
ಹಜ್ಜ್ ಭವನ ದಲಿ ಭಾರತದ ತ್ರಿವರ್ಣ ದ್ವಜದ ಒಂದು ನೋಟ
ಪವಿತ್ರ ಮಕ್ಕಾ ನಗರ, ಇದು ಇಡೀ ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶ ಎಂದು ಪವಿತ್ರ ಕುರ್ಆನ್ ಸ್ಪಷ್ಟವಾಗಿ ತಿಳಿಸಿದೆ. ಇಸ್ಲಾಮಿನ ತಿರುಳನ್ನು ಕಣ್ಣಾರೆ ನೋಡಬೇಕು ಎಂದು ಬಯಸುವವರಿಗೆ ಈ ನಗರವು ಮಾದರೀ ನಗರವಾಗಿದೆ. ಇದು ಪರಿಪೂರ್ಣ ಶಾಂತಿಯನ್ನು ನೀಡುವಂತಹ ವಲಯವೂ ಆಗಿದೆ.
ಅದೆಷ್ಟೋ ದೊಡ್ಡ ಪಾಪಿಯಾದವನು ಇಲ್ಲಿ ಬಂದು ಸೇರಿದಲ್ಲಿ ಅವನಿಗೆ ಶಿಕ್ಷೆಯನ್ನು ನೀಡುವಂತಿಲ್ಲ. ಇದನ್ನು ಅಹಿಂಸಾ ವಲಯದ ಪ್ರತೀಕ ಎಂದೂ ಹೇಳಬಹುದು .ಅದಲ್ಲದೇ ಇದು ಜಗತ್ತಿನ ಕೇಂದ್ರ ಬಿಂದುವೂ ಹೌದು.
ಮನುಷ್ಯನ ಶರೀರದ ಅಂಗಾಗಗಳಲ್ಲಿ ಹೃದಯಕ್ಕೆ ಬಹುದೊಡ್ಡ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಬುಖಾರಿಯ ಒಂದು ಹದೀಸ್ನಲ್ಲಿ ಹೀಗೆ ಹೇಳಲಾಗಿದೆ. “ ನಿಮ್ಮ ಶರೀರದಲ್ಲಿ ಮಾಂಸದ ಒಂದು ತುಂಡು ಇದೆ. ಅದು ದುರುಸ್ತಿಯಾಗಿದ್ದಲ್ಲಿ ಇಡೀ ಶರೀರವೇ ದುರುಸ್ತಿಯಾಗಿರುವುದು. ಅದು ಕೆಟ್ಟಲ್ಲಿ ಇಡೀ ಶರೀರವೇ ಕೆಡುವುದು ಅದುವೇಹೃದಯ ”(ಬುಖಾರಿ,ಕಿತಾಬುಲ್ಈಮಾನ್, ಹದೀಸ್ ನಂ,50). ಇಸ್ಲಾಮಿನಲ್ಲಿ ಕಅಬಾ ಪ್ರದೇಶಕ್ಕೆ ಹೃದಯದ ಮಹತ್ವವನ್ನು ನೀಡಲಾಗಿದೆ. ಹೃದಯವು ಮನುಷ್ಯನನ್ನು ಹೇಗೆ ನಿಯಂತ್ರಿಸುತ್ತದೋ ಅದೇ ರೀತಿ ಪವಿತ್ರ ಕಅಬಾವು ವಿಶ್ವಾದಾದ್ಯಂತ ಸತ್ಯ ವಿಶ್ವಾಸಿಗಳನ್ನು ಒಗ್ಗೂಡುವಂತೆ ಮಾಡುತ್ತದೆ.ಇಡೀ ಶರೀರದ ಮೇಲೆ ಹೃದಯಕ್ಕೆ ಹೇಗೆ ಹತೋಟಿ ಇದೆಯೋ ಅದೇ ತರಹ ಮನುಷ್ಯ ಸಮೂಹವನ್ನುಒಗ್ಗೂಡಿಸುವ, ಮನಸ್ಸಿನಲ್ಲಿ ಏಕತೆಯನ್ನು ಸಾರುವಂತಹ ಮಹಾ ನಿರ್ವಹಣೆಯನ್ನು ಕಅಬಾವು ಮಾಡುತ್ತದೆ .ಇದರ ಅತೀ ಸುಂದರವಾದ ದೃಶ್ಯವನ್ನು ನಾವು ಜಗತ್ತಿನ ಮೂಲೆಮೂಲೆಗಳಿಂದ ಹಜ್ಜ್ ನಿರ್ವಹಣೆಗಾಗಿ ಆಗಮಿಸುವವರ ಮೂಲಕ ಕಾಣಬಹುದು. ಕರಿಯ, ಬಿಳಿಯ, ಶ್ರೀಮಂತ, ಬಡವ ಎಂಬ ಯಾವುದೇ ಭೇಧಭಾವಕ್ಕೆ ಇಲ್ಲಿ ಅವಕಾಶವಿಲ್ಲ. ಪರಸ್ಪರ ಸಹಕಾರ ಮನೋಭಾವದೊಂದಿಗೆ ತಮ್ಮ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಮಹಾನ್ ವ್ಯಕ್ತಿತ್ವ ಇಲ್ಲಿ ರೂಪುಗೊಳ್ಳುತ್ತದೆ. ಕಅಬಾದ ತವಾಫ್ನ ಸಮಯದಲ್ಲಂತೂ ಗತಕಾಲದ ತಪ್ಪುಗಳನ್ನು ನೆನಪಿಸುತ್ತಾ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿಸುವ ಆ ಕ್ಷಣಗಳಂತೂ ಎಂತಹ ಕಲ್ಲು ಹೃದಯದವನಿಗೂ ಮನ ಕಲಕುವಂತೆ ಮಾಡುತ್ತದೆ. ಈ ವಿಹಂಗಮ ನೋಟವು ಪ್ರತಿಯೊಬ್ಬ ಹಾಜಿಗೂ ಹೃದಯ ವೈಶಾಲ್ಯತೆಯನ್ನು ಮೈಗೂಡಿಸುವಂತಹ ಕರೆಯನ್ನು ಸದ್ದಿಲ್ಲದೇ ನೀಡುತ್ತದೆ. ಹಜ್ಜ್ ಕರ್ಮವನ್ನು ಪೂರೈಸಿದ ಪ್ರತಿಯೊಬ್ಬ ಹಾಜಿಯೂ ಜೀವನದಾದ್ಯಂತ ಈ ಕರೆಯನ್ನು ತನ್ನಲ್ಲಿ ಜೀವಂತವಿರಿಸಿದಲ್ಲಿ ಶಾಂತಿಯ ಹೂದೋಟವಾಗಿ ಇಡೀ ಜಗತ್ತನ್ನುನಾವು ಕಾಣಬಹುದು.
ಪವಿತ್ರ ಹಜ್ಜ್ ಕರ್ಮಕ್ಕೆ ಆಂತರಿಕ ಹಾಗೂ ಬಾಹ್ಯವಾದ ಎರಡು ರೂಪಗಳಿವೆ. ಒಂದನೆಯದಾಗಿ ತಕ್ವಾ(ದೇವಭಯ) ಎರಡನೆಯದಾಗಿ ಹಜ್ಜ್ನ ವಿಧಿ ವಿಧಾನಗಳು. ಹಜ್ಜ್ಗಾಗಿ ಹೊರಡುವುದಕ್ಕಿಂತ ಮುಂಚಿತವಾಗಿಯೇ ಇದರ ನಿರಂತರ ತರಬೇತಿಯು ನಮ್ಮಲ್ಲಿ ಈ ಜಾಗೃತಿಯನ್ನು ಉಂಟುಮಾಡಲು ಬಲು ಸಹಕಾರಿ. “ ಒಬ್ಬ ವ್ಯಕ್ತಿ ಅಲ್ಲಾಹನಿಗಾಗಿ ಹಜ್ಜನ್ನುನಿರ್ವಹಿಸಿ, ಎಲ್ಲಾ ತರಹದ ಪಾಪ ಕಾರ್ಯಗಳಿಂದ ಹಾಗೂ ಅಶ್ಲೀಲವಾದ ಕೆಲಸಗಳಿಂದ ತನ್ನನ್ನು ದೂರವಿರಿಸಿದಲ್ಲಿ ಅವನು ಆಗ ತಾನೇ ತಾಯಿಯ ಹೊಟ್ಟೆಯಿಂದ ಹುಟ್ಟಿದ ಶಿಶುವಿನ ಹಾಗೆ ಮರಳುವನು ” (ಹದೀಸ್). ಅಂದರೆ ಅವನ ಎಲ್ಲಾ ಪಾಪಗಳು ಮನ್ನಿಸಲ್ಪಡುವವು. ಇದಕ್ಕಾಗಿಯೇ ಪ್ರವಾದಿ (ಸ್ವ.ಅ) ರವರು ಹಾಜಿಗಳನ್ನು ವಿಶೇಷವಾಗಿ ಗೌರವಿಸಲು ಆಜ್ಞಾಪಿಸಿದ್ದಾರೆ. “ ಒಬ್ಬ ಹಾಜಿಯನ್ನು ನೀವು ಕಂಡಾಗ ಅವನಿಗೆ ಸಲಾಂ ಹೇಳಿರಿ, ಅವನ ಮುಸಾಫ ಮಾಡಿರಿ (ಕೈಕುಲುಕಿರಿ). ಮತ್ತು ಅವನು ತನ್ನ ಮನೆಗೆ ಪ್ರವೇಶಿಸುವುದಕ್ಕಿಂತ ಮುಂಚೆ, ತನಗಾಗಿ ಮಗ್ಫಿರತ್ (ಪಾಪವಿಮೋಚನೆ) ನ ದುವಾ ಮಾಡಲು ಹೇಳಿ. ಯಾಕೆಂದರೆ ಅವನ ಪಾಪಗಳೆಲ್ಲಾ ಮನ್ನಿಸಲ್ಪಟ್ಟಿವೆ ” (ಹದೀಸ್)
ಒಬ್ಬ ಹಾಜಿಯು ಹಜ್ಜನ್ನು ಅಥವಾ ಉಮ್ರಾವನ್ನು ಮಾಡುವಾಗ ಇಹ್ರಾಮ್ನ ಎರಡು ಬಟ್ಟೆಗಳನ್ನು ಧರಿಸಬೇಕಾದುದು ಕಡ್ಡಾಯ. ಒಂದನ್ನು ಲುಂಗಿಯ ರೂಪದಲ್ಲಿ ಇನ್ನೊಂದನ್ನು ಚಾದರದ ರೂಪದಲ್ಲಿ ಮೈಮೇಲೆ ಹಾಕಿಕೊಳ್ಳಬೇಕು. ಈ ಮೂಲಕ ಹಾಜಿಯು ನಾನು ನನ್ನೆಲ್ಲಾ ಆಡಂಬರಗಳನ್ನು, ಅಂತಸ್ತುಗಳನ್ನು, ಹುದ್ದೆಗಳನ್ನು, ಸಾಮರ್ಥ್ಯಗಳನ್ನು ಬದಿಗಿಟ್ಟು ಓ ಅಲ್ಲಾಹನೇ ನಾನೊಬ್ಬ ನಿನ್ನ ದಾಸ ಎಂದು ಸಾರುತ್ತಾನೆ. ಇದೀಗ ಅವನ ಮೇಲೆ ಇಹ್ರಾಮಿನ ಮುಂಚೆ ಇದ್ದಂತಹ ಅದೆಷ್ಟೋ ಪುಣ್ಯ ಕಾರ್ಯಗಳು ನಿಷಿದ್ಧವಾಗುತ್ತವೆ. ಆದರೂ ಅಲ್ಲಾಹನ ಸಂಪ್ರೀತಿಗಾಗಿ ತನ್ನ ಮೇಲೆ ವಿಧಿಸಿದಂತಹ ಈ ನಿಷಿದ್ಧಗಳನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ಅವನು ಸ್ವೀಕರಿಸುತ್ತಾನೆ. ನೈಜವಾಗಿ ಇದುವೇ ಎಲ್ಲಾ ಇಬಾದತ್ಗಳ ಮರ್ಮವಾಗಿದೆ. ಒಬ್ಬ ಸತ್ಯವಿಶ್ವಾಸಿಯು ಈ ಭೂಲೋಕದಲ್ಲಿ ತನಗಿಷ್ಟ ಬಂದಂತೆ ಜೀವಿಸುವಂತಿಲ್ಲ. ಅವನ ಎಲ್ಲಾ ಇಷ್ಟಾನಿಷ್ಟಗಳು ಸೃಷ್ಟಿಕರ್ತನ ಆಜ್ಞೆಗೆ ಅನುಸಾರವಾಗಿರಬೇಕು. ಇದನ್ನು ಹೊರತು ಸ್ವೇಚ್ಚಾಚಾರಿಯಾಗಿ ಜೀವಿಸಿದಲ್ಲಿ ಅವನ ಬದುಕು ಎಂದಿಗೂ ಸಾರ್ಥಕವಾಗಲು ಸಾಧ್ಯವಿಲ್ಲ. ನಮಗೆ ಇಹ್ರಾಮ್ನ ಮೂಲಕ ಲಭಿಸುವಂತಹ ಬಹು ದೊಡ್ಡ ಪಾಠ ಇದಾಗಿದೆ. ಇನ್ನೊಂದು ಬಹುದೊಡ್ಡ ವಿಶೇಷತೆಯೆಂದರೆ, ಇಹ್ರಾಮನ್ನು ಧರಿಸಿದ ನಂತರ ಅಲ್ಲಾಹನಿಗಾಗಿ ಸಮರ್ಪಣಾ ಮನೋಭಾವ ನಮ್ಮಲ್ಲಿ ಜಾಗೃತಿಗೊಳ್ಳುತ್ತದೆ. ಧೃಢ ವಿಶ್ವಾಸದೊಂದಿಗೆ ಅಲ್ಲಾಹನ ಆದೇಶಗಳ ಈಡೇರಿಕೆಗಾಗಿ ತನ್ನನ್ನು ತಾನು ಸಮರ್ಪಿಸುತ್ತೇನೆ ಎಂದು ಸಂಕಲ್ಪ ಮಾಡಿದಲ್ಲಿ ಇಂತಹ ಮನೋಭಾವ ನಮ್ಮಲ್ಲಿ ಬೆಳೆಯುವುದು ಖಂಡಿತ. ಅತ್ಯಂತ ಶಾಂತಿಯಿಂದ, ಸಮಾಧಾನದಿಂದ, ವಿನಯಶೀಲರಾಗಿ, ಎಲ್ಲಾ ತರಹದ ಹಿಂಸೆಗಳಿಂದ ತನ್ನನ್ನು ದೂರವಿಟ್ಟು ಸಂಪೂರ್ಣ ದಾಸ್ಯತ್ಯವನ್ನು ನಾವು ಆ ಸಮಯದಲ್ಲಿ ತೋರಿಸುತ್ತೇವೆ. ಇಂತಹ ಮನಸ್ಥಿತಿಯೇ ನಮ್ಮ ಯಶಸ್ಸಿಗೆ ಬೆನ್ನೆಲುಬು. ದಾಸ್ಯತ್ವ ಎಂಬ ಪದವು ಅಲ್ಲಾಹನಿಗೆ ಅದೆಷ್ಟು ಇಷ್ಟವಾಗಿದೆ ಎಂದರೆ, ತನ್ನ ಪ್ರವಾದಿಗಳನ್ನು ಅಬ್ದ್ (ದಾಸ) ಎಂಬ ನಾಮ ವಿಶೇಷತೆಯೊಂದಿಗೆ ಕರೆದಿದ್ದಾನೆ.
ಹಜ್ಜ್ ಯಾತ್ರಿಕರ ಪ್ರಪ್ರಥಮ ಕರ್ಮವು ತವಾಫ್ ಆಗಿದೆ. ಅತ್ಯಂತ ವಿನಯಶೀಲತೆಯಿಂದ ಹಜರುಲ್ಅಸ್ವದ್ (ಕಪ್ಪುಶಿಲೆ) ನಿಂದ ಪ್ರಾರಂಭವಾಗಿ ಏಳು ಸುತ್ತುಗಳ ಪ್ರದಕ್ಷಿಣೆಯನ್ನು ನಾವು ಹಾಕುತ್ತೇವೆ, ಇದಕ್ಕೆ ತವಾಫ್ ಎನ್ನಲಾಗುತ್ತದೆ. ಇಲ್ಲಿ ಕರಿಯ, ಬಿಳಿಯ, ರಾಜ, ಸೇನಾನಿ, ಬಡವ, ಬಲ್ಲಿದ ಎಂಬ ಯಾವುದೇ ಭೇಧ ಭಾವಗಳಿಲ್ಲ. ಎಲ್ಲರೂ ಒಂದೇ ಸಮುದಾಯದವರು ಎಂಬ ಭಾವನೆಯ ಮೂಲಕ ಜಾಗತಿಕ ಮುಸ್ಲಿಮರು ಒಂದೇ ಕೇಂದ್ರ ಬಿಂದುವಿನಿಂದ ತವಾಫ್ ಮಾಡುತ್ತಿರುತ್ತಾರೆ. ಈ ಮೂಲಕ ಹಾಜಿಯು ಆಂತರಿಕವಾಗಿಯೂ, ಬಾಹ್ಯವಾಗಿಯೂ ಸಂಪೂರ್ಣವಾಗಿ ತನ್ನನ್ನು ಶುದ್ಧೀಕರಿಸುತ್ತಾನೆ. ತವಾಫ್ನ ಮುಕ್ತಾಯದ ನಂತರ ಸಫಾ ಹಾಗೂ ಮರ್ವಾದ ನಡುವೆ ಏಳು ಬಾರಿ ಸಅ್ಯ್ ಮಾಡಲಾಗುತ್ತದೆ. ತವಾಫ್ ಹಾಗೂ ಸಅ್ಯ್ ನೈಜವಾಗಿ ಅಲ್ಲಾಹನ ಒಂದು ಬಹು ದೊಡ್ಡ ವ್ಯವಸ್ಥೆಯಾಗಿದೆ. ಈ ಎರಡು ವಿಧಿಗಳನ್ನು ಪೂರೈಸುವ ಮೂಲಕ ದಾಸನು ಅಲ್ಲಾಹನಲ್ಲಿ, ಓ ಅಲ್ಲಾಹನೇ, ನಾನು ನಿನ್ನ ದಾಸ್ಯತ್ವಕ್ಕೆ ಸಂಪೂರ್ಣ ವಿಧೇಯನಾಗಿದ್ದೇನೆ. ನಿನ್ನ ಆದೇಶಗಳನ್ನು ಶಿರಸಾ ಪಾಲಿಸುವಲ್ಲಿ ನನ್ನ ಯಾವುದೇ ಆಕ್ಷೇಪಗಳಿಲ್ಲ ಎಂದು ಸಾರಾಸಗಟಾಗಿ ಒಪ್ಪುತ್ತಾನೆ. ಸ್ವೇಚ್ಛಾಚಾರಿಯಾಗಿ ಒಬ್ಬ ವ್ಯಕ್ತಿಯ ಜೀವನ ನಿರ್ವಹಣೆಯು ಅವನ ನೈತಿಕ ಅಧಃಪತನಕ್ಕೆ ಕಾರಣ ಎಂಬುವುದರಲ್ಲಿ ಎರಡು ಮಾತಿಲ್ಲ. ದಾಸ್ಯರಾಧನೆಯೇ ಯಶಸ್ಸಿನ ಮೂಲ ಗುಟ್ಟು ಎಂಬ ಪಾಠವು ಈ ಸಮಯದಲ್ಲಿ ನಮಗೆ ದೊರಕುತ್ತದೆ. ನಿಶ್ಚಯವಾಗಿಯೂ ಸಅ್ಯ್ ಎಂಬ ಪದದ ಅರ್ಥವು “ಪ್ರಯತ್ನ” ಎಂದಾಗಿದೆ. ನಿರಂತರವಾದ ಪ್ರಾರ್ಥನೆಯೊಂದಿಗೆ ನಮ್ಮ ಪ್ರಯತ್ನವು ಜಾರಿಯಲ್ಲಿದ್ದಲ್ಲಿ ಅದುವೇ ನಿಜವಾದ ಯಶಸ್ಸು. ಇದರ ಹೊರತಾಗಿ ಸಂಕಷ್ಟಗಳು ಎದುರಾದಂತಹ ಸಮಯದಲ್ಲಿ ಸಂಯಮವನ್ನು ಕಾಪಾಡದೇ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳಿಗೆ ಯಾವ ಕಾರಣಕ್ಕೂ ಬರಬಾರದು. ಇದಕ್ಕೆ ನಾವು ಯಾವಾಗಲೂ ಆಸ್ಪದವನ್ನೇ ನೀಡಬಾರದು. ಪ್ರವಾದಿ ಇಬ್ರಾಹೀಂ (ಅ.ಸ) ರವರ ಪತ್ನಿಯಾದ ಹಾಜಿರಾರವರು ತನ್ನ ಎಳೆಯ ಮಗುವಿನ ಬಾಯಾರಿಕೆಯನ್ನು ನೀಗಿಸಲಿಕ್ಕಾಗಿ ಸಫಾ ಹಾಗೂ ಮರ್ವಾದ ಬೆಟ್ಟಗಳ ನಡುವೆ ನೀರನ್ನು ಹುಡುಕುತ್ತಾ ಓಡಿದ್ದರು. ಆ ಸಮಯದಲ್ಲಿ ಯಾವುದೇ ಕಾರಣಕ್ಕೂನಿರಾಶರಾಗಲಿಲ್ಲ. ಅಲ್ಲಾಹನು ಅವರ ಪ್ರಯತ್ನವನ್ನು ಸ್ವೀಕರಿಸಿ ಝಮ್ಝಮ್ ಎಂಬ ಪವಿತ್ರವಾದ ನೀರನ್ನು ನೀಡುವ ಮೂಲಕ ಅವರನ್ನು ಸಂತೈಸಿದನು. ಅಲ್ಲಾಹನು ಲೋಕಾಂತ್ಯದ ತನಕ ಇದರ ಸ್ಮರಣೆಯನ್ನು ಪ್ರತಿಯೊಬ್ಬ ಹಾಜಿಗೂ ಕಡ್ಡಾಯಗೊಳಿಸಿದನು. ಅಲ್ಲಾಹನ ಇಬಾದತ್ಗಳನ್ನು ಮಾಡುವ ಮೂಲಕ ತನ್ನ ಗುರಿಯನ್ನು ಸಾಧಿಸಲು ಪ್ರಯತ್ನಗಳನ್ನು ಮುಂದುವರಿಸುವಲ್ಲಿ ಯಾವುದೇ ರೀತಿಯ ಹಿಂಜರಿಕೆ ಸಲ್ಲ ಎಂಬ ಪ್ರಬಲವಾದ ಸಂದೇಶ ನಮಗೆ ಇದರಲ್ಲಿ ದೊರೆಯುತ್ತದೆ.

ಝುಲ್ಹಜ್ ತಿಂಗಳ 8 ರಿಂದಆರಂಭಗೊಂಡು 12 ನೇತಾರೀಕಿನವರೇಗೆ ಹಜ್ನಶ್ರೇಷ್ಠದಿನಗಳು. 8ನೇ ತಾರೀಕಿನಂದು ಮಿನಾದಲ್ಲಿ ತಂಗುತ್ತೇವೆ. ಅಂದು ನಿಜವಾಗಿ ಮರುದಿವಸ 9 ನೇತಾರೀಕಿನ ಅರಫಾ ದಿನದ ಪೂರ್ವತಯಾರಿಗಾಗಿ ಅಣಿಯಾಗಲು ಈ ಆದೇಶವನ್ನು ನೀಡಲಾಗಿದೆ. ಅರಫಾ ದಿನ ಒಬ್ಬ ವ್ಯಕ್ತಿ ಕೆಲವೇ ಕೆಲವು ಕ್ಷಣಗಳಿಗಾದರೂ ಅಲ್ಲಿ ತಂಗುವುದು ಖಡ್ಡಾಯವಾಗಿದೆ. ತಪ್ಪಿ ಹೋದಲ್ಲಿ ಅವನ ಹಜ್ಜ್ ಸಿಂಧುವಲ್ಲ. ಅರಫಾ ದಿನ ಝೊಹರ್ ಹಾಗೂ ಅಸರ್ ನಮಾಝ್ಗಳನ್ನು ನಿರ್ವಹಿಸಿ ಮಗ್ರಿಬ್ ತನಕ ಬೆಟ್ಟ ಗುಡ್ಡಗಳ ನಡುವಿನ ಆ ಮೈದಾನದಲ್ಲಿ ತಂಗುತ್ತೇವೆ. ಕೆಲವೇ ಕೆಲವು ಘಂಟೆಗಳ ತಂಗುವಿಕೆಯು ಅಲ್ಲಿ ಮನ ಕಲುಕುವಂತ ಹದೃಶ್ಯವನ್ನು ನೋಡಿ ತನಗರಿವಿಲ್ಲದಂತೆಯೇ ಅವನ ಕಣ್ಣುಗಳನ್ನು ತೇವಗೊಳಿಸುತ್ತವೆ. ಹಾಜಿಗಳ ಸಮೂಹವು ಅಲ್ಲಾಹನಲ್ಲಿ ಪಾಪ ವಿಮೋಚನೆಗಾಗಿ ಬೇಡುವಂತಹ ಅಭೂತ ಪೂರ್ವ ದೃಶ್ಯಗಳನ್ನುನೋಡುತ್ತಾ ನೋಡುತ್ತಾ ತನ್ನ ಜೀವನವನ್ನು ಸಾಕಾರಗೊಳಿಸುವಂತಹ ತೀರ್ಮಾನವನ್ನು ಮಾಡಲು ಉತ್ತೇಜಿಸುತ್ತದೆ. ಆ ಸಮಯದಲ್ಲಿ ನಿಶ್ಕಳಂಕ ಮನಸ್ಸಿನಿಂದ ಪ್ರಾರ್ಥಿಸಬೇಕು. ಮುಂದಿನ ಜೀವನದಲ್ಲಿ ಸಿಗುವ ಸಮಯವು ಅತ್ಯಂತ ಅಮೂಲ್ಯವಾದುದು, ಇದೀಗ ನನ್ನೆಲ್ಲಾ ಗತ ಪಾಪಗಳು ಮನ್ನಿಸಲ್ಪಟ್ಟಿವೆ.ಆದ್ದರಿಂದ ಎಲ್ಲಾ ತರಹದ ಪೈಶಾಚಿಕ ಕೃತ್ಯಗಳಿಂದ ತನ್ನನ್ನು ದೂರವಿಡಬೇಕು ಎಂಬ ದೃಢವಾದ ಪ್ರತಿಜ್ಞೆ ಮಾಡಲು ಉತ್ತೇಜಿಸುತ್ತದೆ.ಪ್ರವಾದಿಯವರು (ಸ್ವ.ಅ) ಅರಫಾ ದಿನದಲ್ಲಿ ಪಿಶಾಚಿಯು ಬೆದರಿ ಓಡುವನು” ಎಂದುಹೇಳಿದ್ದಾರೆ.
“ಅರಫಾತ್ ನಿಂದ ನೀವು ಮರಳುವಾಗ ಮಶ್ಅರುಲ್ ಹರಾಮ್ನ ಹತ್ತಿರ ಅಲ್ಲಾಹನ ಝಿಕ್ರ್ ಮಾಡಿರಿ” (ಅಲ್ಬಕರ 198) ಎಂದು ಕುರ್ಆನ್ನಲ್ಲಿ ಅಲ್ಲಾಹನು ಹೇಳುತ್ತಾನೆ.9 ನೇ ತಾರೀಕಿನ ಮಗ್ರಿಬ್ ನಂತರ ಮುಝ್ದಲಿಫದತ್ತ ಸಾಗಬೇಕಾಗಿದೆ. ಇಲ್ಲಿ ಮಗ್ರಿಬ್ ಹಾಗೂ ಇಶಾ ನಮಾಝ್ಗಳನ್ನು ಮಾಡಲಾಗುತ್ತದೆ. ಪವಿತ್ರ ಕುರ್ಆನ್ನಲ್ಲಿ ಈ ಸ್ಥಳಕ್ಕೆ ಮಶ್ಅರುಲ್ ಹರಾಮ್ ಎಂದು ಹೇಳಲಾಗಿದೆ. ನಮ್ಮಲ್ಲಿ ಪ್ರಜ್ಞೆಯನ್ನು ಮೂಡಿಸುವ ಸ್ಥಳ ಎಂದು ಇದರ ಅರ್ಥ.
ಝುಲ್ಹಜ್ 10ನೇ ತಾರೀಕಿನಂದು ಜಮ್ರಾತ್ ಎಂಬ ಸ್ಥಳಕ್ಕೆ ಹೋಗಿ ಶೈತಾನನಿಗೆ ಏಳು ಕಲ್ಲುಗಳನ್ನು ಎಸೆಯಲಾಗುತ್ತದೆ. ಕಲ್ಲೆಸೆಯಲು ಹೋಗುವಾಗ ತಲ್ಬಿಯತ್ನ್ನುಹೇಳುತ್ತಾ ಸಾಗಲಾಗುತ್ತದೆ. ಕಲ್ಲನ್ನು ಎಸೆಯುವಂತಹ ಸಮಯದಲ್ಲಿ ಪ್ರತಿಯೊಂದು ಬಾರಿಯೂ “ಅಲ್ಲಾಹುಅಕ್ಬರ್” ಎಂದು ಹೇಳಲಾಗುತ್ತದೆ. ಈ ಪದಗಳು ಹಾಜಿಯನ್ನು ಶೈತಾನನಿಗೆ ಪ್ರತಿರೋಧವನ್ನು ತೋರಲು ಅಣಿಯಾಗುವಂತೆ ಪ್ರೇರೇಪಿಸುತ್ತದೆ. ಎಲ್ಲಾ ತರಹದ ಪೈಶಾಚಿಕ ಕೃತ್ಯಗಳಿಂದ ತಾನೂ ದೂರವಿದ್ದು ಇತರರನ್ನೂ ದೂರವಿರಿಸಲು ಪಣ ತೊಡುವಂತ ಹಸಮಯವಾಗಿದೆ ಅದು.
ಇನ್ನು ಬಲಿಯರ್ಪಿಸುವ ಕಾರ್ಯ. ಪ್ರವಾದಿ ಹಝ್ರತ್ ಇಬ್ರಾಹೀಮ್ (ಅ.ಸ) ರವರು ತನ್ನ ಕಣ್ಮಣಿಯಾದ ಹಝ್ರತ್ ಇಸ್ಮಾಯೀಲ್ (ಅ.ಸ) ರವರನ್ನುಅಲ್ಲಾಹನ ಆದೇಶದ ಪ್ರಕಾರ ಬಲಿ ಕೊಡಲು ತಯಾರಾಗುತ್ತಾರೆ. ಇವರ ಸ್ಮರಣೆಗೋಸ್ಕರ ಪ್ರತಿಯೊಬ್ಬ ಹಾಜಿಗೂ ಇದನ್ನು ಕಡ್ಡಾಯಗೊಳಿಸಲಾಗಿದೆ. ಜೀವನದ ಇಳಿವಯಸ್ಸಿನಲ್ಲಿ ದೊರೆತಂತಹ ಅನುಗ್ರಹವನ್ನು ಬಲಿಯರ್ಪಿಸುವುದೆಂದರೆ ಇದನ್ನು ಊಹಿಸಲೂ ಸಾಧ್ಯವಿಲ್ಲ. ಪವಿತ್ರ ಕುರ್ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ “ ಅವುಗಳ ಮಾಂಸವಾಗಲೀ ರಕ್ತವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಅವನಿಗೆ ನಿಮ್ಮ ಧರ್ಮನಿಷ್ಠೆ ತಲುಪುತ್ತದೆ” (ಸೂರಃಹಜ್ಜ್: 37). ಹಜ್ಜ್, ನಾವು ಅತಿಯಾಗಿ ಇಚ್ಚಿಸುವಂತ ಹವಸ್ತುಗಳನ್ನು ಅಲ್ಲಾಹನಿಗಾಗಿ ತ್ಯಾಗ ಮಾಡುವಂತಹ ಸಮಯ. “ನೀವು ನಿಮಗೆ ಬಹಳ ಪ್ರೀಯವಾಗಿರುವ ವಸ್ತುಗಳನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರೆಗೆ ಪುಣ್ಯಗಳಿಸಲಾರಿರಿ” (ಸೂರಃಆಲೆಇಮ್ರಾನ್:92) ನಮ್ಮಲ್ಲಿ ತ್ಯಾಗ ಬಲಿದಾನದ ಭಾವನೆ ಜಾಗೃತಗೊಂಡರೆ ನಮ್ಮ ಬಲಿದಾನಕ್ಕೆ ಒಂದು ಅರ್ಥವಿರುತ್ತದೆ. ನಿಜವಾಗಿ ಇದು ಪ್ರವಾದಿ ಇಬ್ರಾಹೀಮ್ (ಅ.ಸ) ರವರ ತ್ಯಾಗ ಮನೋಭಾವದ ಪರೀಕ್ಷೆಯಾಗಿತ್ತು. ಕರುಳ ಕುಡಿಯ ಪ್ರೀತಿಯು ಅಲ್ಲಾಹನ ಆಜ್ಞಾಪಾಲನೆಗೆ ತಡೆಯಾಗುತ್ತದೋ ಎಂದು ಪರೀಕ್ಷಿಸಬೇಕಿತ್ತು. ನೀವು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೀರಿ ಎಂಬ ಪ್ರಶಸ್ತಿಯನ್ನು ಅಲ್ಲಾಹನು ನೀಡಿದನು. (ಅಸ್ಸಾಫ್ಫಾತ್).
ಝುಲ್ಹಜ್ ತಿಂಗಳ 11 ಹಾಗೂ 12ಕ್ಕೂ ಮೂರೂ ಜಮ್ರಾತ್ಗಳಿಗೆ ಏಳು ಏಳು ಕಲ್ಲುಗಳನ್ನು ಎಸೆದು ಬರುತ್ತೇವೆ. ಪಿಶಾಚಿಯ ವಿರುದ್ಧದ ಹೊರಾಟಕ್ಕೆ ನಾವು ಅಣಿಯಾಗಿದ್ದೇವೆ ಎಂಬುವುದನ್ನು ಮರೆಯಕೂಡದು ಎಂದು ಇದು ನಮ್ಮನ್ನು ನೆನಪಿಸುತ್ತದೆ. ಈ ನಮ್ಮ ಎಸೆತವು ಹಜ್ಜ್ನಲ್ಲೇ ಕೊನೆಗೊಳ್ಳಬಾರದು. ಬದಲಾಗಿ ಜೀವನದಾದ್ಯಂತ ಪೈಶಾಚಿಕ ಕೃತ್ಯಗಳ ವಿರುದ್ಧ ಹೋರಾಡುವ ಕಿಚ್ಚು ನಮ್ಮಲ್ಲಿ ಜಾಗೃತಗೊಳ್ಳಬೇಕು. ಹೀಗೆ ಪ್ರತಿಯೊಬ್ಬ ಹಾಜಿಯೂ ಹೋರಾಟದ ಮನೋಭಾವಗಳನ್ನು ತನ್ನಲ್ಲಿ ಜೀವಂತವಿರಿಸಿ ಹಜ್ಜ್ನ ವಿಧಿ ವಿಧಾನಗಳನ್ನು ಪೂರೈಸಿ ತನ್ನ ಹುಟ್ಟೂರಿಗೆ ಮರಳುತ್ತಾನೆ. ಪ್ರತೀ ವರ್ಷ ಲಕ್ಷೋಪಲಕ್ಷ ಹಾಜಿಗಳು ತಮ್ಮ ತಮ್ಮ ಊರುಗಳಿಗೆ ಮರಳುತ್ತಾರೆ. ಪ್ರವಾದಿ ಮುಹಮ್ಮದ್ (ಸ್ವ.ಅ) ರವರು ತೋರಿಸಿದಂತಹ ಹಾದಿಯಲ್ಲಿ ತಕ್ವಾದೊಂದಿಗೆ ಪೂರೈಸಿದ ಹಜ್ಜ್ನ ಒಳ ಮರ್ಮಗಳು ಪ್ರತಿಯೊಬ್ಬರಲ್ಲಿಯೂ ಜಾಗೃತಗೊಂಡಲ್ಲಿ ಅದೆಂತಹ ವಿಶ್ವವನ್ನು ನಾವು ಕಾಣಲು ಸಾಧ್ಯ? ಇದನ್ನು ವಿವರಿಸಲು ಅಸಾಧ್ಯ. ಈ ಬಾರಿಯ ಹಜ್ಜ್ ಅಂತಹ ಅಭೂತ ಪೂರ್ವ ಬದಲಾವಣೆಯನ್ನು ತರುವಂತಾಗಲಿ. (ಆಮೀನ್)